

ದಾಭೋಲಿ ಮಠ ಶ್ರೀ ಶ್ರೀ ಪೂರ್ಣಾನಂದ ಸ್ವಾಮಿ ಮಹಾರಾಜ್
ಗೋಳವಣ್ ಮಠದ ಕೊನೆಯ ಮಠಾಧೀಶರಾದ ಶ್ರೀ ಶಂಕರಾನಂದ ಸ್ವಾಮಿ ಮಹಾರಾಜರು ತಮ್ಮ ವೃದ್ಧಾಪ್ಯ ಸಮೀಪಿಸುತ್ತಿರುವುದರಿಂದ ಸಮಾಜವನ್ನು ಸಂಘಟಿಸಬಲ್ಲ ಒಬ್ಬ ಮಹಾನ್ ಶಿಷ್ಯನ ಶೋಧನೆ ಮಾಡತೊಡಗಿದರು.
ಅದೇ ಕಾಲದಲ್ಲಿ ಭಾರದ್ವಾಜ್ ಗೋತ್ರದ ಸಿದ್ಧ ಪ್ರಭು ಎಂಬ ಹೆಸರಿನ ಒಬ್ಬ ಸಿದ್ಧ ಪುರುಷರ ಜನನ ದಾಭೋಲಿಯಲ್ಲಿ ಆಯಿತು.
ಇವರ ಜೀವನ ಚರಿತ್ರೆಯು ತುಂಬಾ ಹೃದಯಂಗಮಯವಾಗಿದೆ. ಚಿಕ್ಕಂದಿನಿಂದಲೂ ಏಕಾಂಗಿಯಾಗಿ ಅನೇಕ ತಾಸುಗಳ ಕಾಲ ಒಂದೇ ಸ್ಥಳದಲ್ಲಿ ಕುಳಿತು ಕೊಳ್ಳುತ್ತಿದ್ದರು. ಉಪನಯದ ನಂತರ ಪ್ರಸ್ತುತ ಮಠದ ಹತ್ತಿರವೇ ಇರುವ ಗುಡ್ಡದ ಮೇಲೆ ಒಂದು ಗುಹೆಯಲ್ಲಿ ಎಷ್ಟೋ ದಿನಗಳನ್ನು ಕಳೆಯುತ್ತಿದ್ದರು. ಒಂದು ದಿನ ಅವರಿಗೆ ಒಬ್ಬ ದೈದೀಪ್ಯಮಾನ ಯತಿಯ ದರ್ಶನವಾಯಿತು. ಅಲ್ಲಿಂದಲೇ ತಂದೆ ತಾಯಿಗಳಿಗೆ ಮಾಹಿತಿಯನ್ನೂ ನೀಡದೆ ಯತಿಗಳ ಜೊತೆಯಲ್ಲಿ ತೆರಳಿದರು. ಅವರ ತಂದೆ ತಾಯಿಗಳು ಅನೇಕ ದಿನಗಳವರೆಗೆ ತಮ್ಮ ಮಗನ ಶೋಧನೆ ನಡೆಸಿದರು. ಆದರೆ ಎಲ್ಲಿಯೂ ಪತ್ತೆಯಾಗದಿದ್ದುದರಿಂದ ಮಗನ ಆಸೆಯನ್ನು ಬಿಟ್ಟುಬಿಟ್ಟರು.
ಯತಿಗಳ ಜೊತೆ ತೀರ್ಥ ಯಾತ್ರೆಯಲ್ಲಿ ಕೆಲವು ವರ್ಷಗಳನ್ನು ಕಳೆದು ಕೃತಾರ್ಥತೆ ಪಡೆದು ತಮ್ಮ ಜನ್ಮ ಭೂಮಿ ದಾಭೋಲಿಗೆ ಮರಳಿದರು.
ಶ್ರೀ ಶಂಕರಾನಂದರು ಸಮಾಜದ ಇಚ್ಛಾನುಸಾರ ಹಾಗೂ ಸಂಬಂಧಿತರ ಸಮ್ಮತಿಯ ಮೇರೆಗೆ ಶ್ರೀ ಸಿದ್ಧ ಪ್ರಭುಗಳಿಗೆ ಔಪಚಾರಿಕವಾಗಿ ದೀಕ್ಷಾ ವಿಧಿಗಳನ್ನು ನೆರವೇರಿಸಿ ಅವರನ್ನು ಶ್ರೀ ಶ್ರೀ ಮದ್ ಪೂರ್ಣಾನಂದ ಸ್ವಾಮಿ ಎಂದು ನಾಮಕರಣ ಮಾಡಿದರು. ಗೋಳವಣ್ ಮಠದ ಪೂರ್ಣ ಜವಾಬ್ದಾರಿಯನ್ನು ಶ್ರೀ ಪೂರ್ಣಾನಂದರಿಗೆ ವಹಿಸಿ ಕೆಲ ಸಮಯದ ನಂತರ ಶ್ರೀ ಶಂಕರಾನಂದ ಸ್ವಾಮಿಗಳು ಸಮಾಧಿಸ್ಥರಾದರು. ಶ್ರೀ ಪೂರ್ಣಾನಂದರಂತಹ ಜ್ಞಾನಿ ತಪೋನಿಧಿಯು ಮಠಾಧೀಶರಾಗಿ ದೊರೆತದ್ದು ಕುಡಾಳ್ ದೇಶಕರರು ತಮ್ಮ ಸೌಭಾಗ್ಯ ಎಂದು ಭಾವಿಸಿದರು. ತಮ್ಮ ನೂತನ ಸ್ವಾಮೀಜಿಯ ತಪಸ್ಸಿಗೆ ಪ್ರಿಯವಾದ ದಾಭೋಲಿಯಲ್ಲಿ ಒಂದು ನವ್ಯ ಮಠವನ್ನು ಕಟ್ಟುವ ಶಿಷ್ಯ ವರ್ಗದವರ ಇಚ್ಛೆಯಂತೆ, ಸರ್ವಭಕ್ತರ ಪ್ರಯತ್ನದಿಂದ ಕುಡಾಳ್ ದೇಶಕಾರರ ನೂತನ ತೇಜಸ್ವಿ ಮಠದ ಉದಯವಾಯಿತು. ಅದೇ ಶ್ರೀ ಮಠ ಸಂಸ್ಥಾನ ದಾಭೋಲಿ.
ತಮ್ಮ ಆತ್ಮ ಸಾಕ್ಷಾತ್ಕಾರದಿಂದ ಶ್ರೀ ಪೂರ್ಣಾನಂದ ಸ್ವಾಮಿಗಳಿಗೆ ವಿಲಕ್ಷಣ ತೇಜ ಮತ್ತು ಅಮೋಘ ಸಿದ್ಧಿಗಳು ಪ್ರಾಪ್ತವಾದವು .ತಮ್ಮ ಇಕ್ಕೆಲೆಗಳಲ್ಲಿ ಎರಡು ವ್ಯಾಘ್ರಗಳ ಮೇಲೆ ಕೈಗಳನ್ನು ಇಟ್ಟು ಅನೇಕ ದಿನಗಳವರೆಗೆ ಧ್ಯಾನಸ್ಥರಾಗಿರುತ್ತಿದ್ದರು. ಹಾಗೆಯೇ ಹುಲಿಯ ಮೇಲೆ ಕುಳಿತು ಸಂಚಾರವನ್ನು ಮಾಡುತ್ತಿದ್ದ ಇತಿಹಾಸವಿದೆ. ಅಂಧರಿಗೆ ದೃಷ್ಟಿದಾನ, ಮೂಗರಿಗೆ ಮಾತನಾಡುವ ಶಕ್ತಿಯನ್ನು ಕರುಣಿಸಿದ ಮಹಾನ್ ಕರುಣಾಮಯಿ,
ಮೃತಪಟ್ಟ ವ್ಯಕ್ತಿಗೆ ಜೀವ ಬರಿಸಿದಂತಹ ಅಲೌಕಿಕ ಚಮತ್ಕಾರ ಮಾಡಿದವರು. ಸ್ವಾಮಿಜೀಯವರಿಗೆ ಏಕಾಂತ ಮತ್ತು ಧ್ಯಾನಸ್ಥರಾಗಿರುವುದು ಹೆಚ್ಚು ಪ್ರಿಯವಾಗಿತ್ತು .
ಇದರಿಂದ ಜನರಿಗೆ ಅವರಲ್ಲಿ ಬಹಳ ಶ್ರದ್ಧೆ ,ಭಕ್ತಿ ಉಂಟಾಯಿತು. ಇವರ ಕೀರ್ತಿಯು ನಾಡಿನಾದ್ಯಂತ ಪಸರಿಸಿತು.
ಪರಿಣಾಮವಾಗಿ ತಂಡೋಪತಂಡವಾಗಿ ಜನರು ಸ್ವಾಮಿಯ ದರ್ಶನಕ್ಕಾಗಿ ಬರತೊಡಗಿದರು. ಬಡವ,ಬಲ್ಲಿದರೆಂಬ ಭೇದವಿಲ್ಲದೆ ಎಲ್ಲಾ ಜನರು ಭಕ್ತಿ ಭಾವದಿಂದ ಅವರನ್ನು ಗೌರವಿಸುತ್ತಿದ್ದರು. ಇತಿಹಾಸದಲ್ಲಿ
ಶ್ರೀ ಪೂರ್ಣಾನಂದರಂತಹ ಮಹಾನ್ ವ್ಯಕ್ತಿ ಪೀಠದಲ್ಲಿ ವಿರಾಜಮಾನರಾಗಿದ್ದುದು ಸಮಾಜದ ಉನ್ನತ ಪಥದಲ್ಲಿ ಒಂದು ನೂತನ ಅಧ್ಯಾಯದ ಮೊದಲ ಹೆಜ್ಜೆಯಾಗಿತ್ತು.
ಶ್ರೀ ಪೂರ್ಣಾನಂದ ಸ್ವಾಮಿಯವರು ತಮ್ಮ ತಪಸ್ವಿ ಸಾಧಕ ಶಿಷ್ಯರಾದ ಶ್ರೀ ರುದ್ರಜಿ ಪಂತ ರಿಗೆ
ಶ್ರೀ ಶ್ರೀಮದ್ ಚಿದಾನಂದಸ್ವಾಮಿ ಎಂದು ನಾಮಕರಣ ಮಾಡಿದರು.
ಶ್ರೀ ಪೂರ್ಣಾನಂದ ಸ್ವಾಮೀಜಿಯವರ ಪವಾಡಗಳನ್ನು ಕೇಳಿದಾಗ ಮೈಯಲ್ಲಿ ವಿದ್ಯುತ್ ಸಂಚಾರವಾದಂತಾಗುತ್ತದೆ. ಜೀವನ ಚರಿತ್ರೆಯು ನಮ್ಮ ಕಲ್ಪನೆಗೂ ನಿಲುಕದಂತಿದೆ.
ಶ್ರೀ ಪೂರ್ಣಾನಂದ ಸ್ವಾಮಿಯವರು 1685( ಕ್ರಿ.ಶ.1763) ಚೈತ್ರ ಕೃಷ್ಣ ಪಕ್ಷದ ಚತುರ್ಥಿಯಂದು ದಾಭೋಲಿ ಮಠದಲ್ಲಿ ಸಂಜೀವಿನಿ ಸಮಾಧಿಸ್ಥರಾದರು. ಈಗಲೂ ಅಲ್ಲಿ ವರ್ಷಕ್ಕೆ ಒಮ್ಮೆ ಅಥವಾ ಎರಡು ಬಾರಿ ಹುಲಿಗಳ ಸಂಚಾರವಿದ್ದು, ಅವುಗಳು ಯಾರಿಗೂ ಹಾನಿ ಮಾಡದಿರುವುದೇ ಅಚ್ಚರಿ ಮೂಡಿಸಿದೆ. ಭಕ್ತರ ಕನಸಿನಲ್ಲಿ ಗೋಚರಿಸಿದಂತಹ ಘಟನೆಗಳನ್ನು ಕೇಳಿದಾಗ ನಮ್ಮನ್ನು ಮೂಕವಿಸ್ಮಿತರನ್ನಾಗಿ ಮಾಡುತ್ತದೆ. ವ್ಯಾಧಿಗ್ರಸ್ತರಿಗೆ, ಪಿಶಾಚಿ ಪೀಡಿತರಿಗೆ, ಸ್ತ್ರೀ ಪುರುಷರಿಗೆ ಹಾಗೂ
ಸರ್ವ ಭಕ್ತರಿಗೂ ತಮ್ಮ ಮನೋಕಾಮನೆಗಳನ್ನು ಈಡೇರಿಸುವಂತಹ ಜಾಗೃತ ವ್ಯವಸ್ಥೆಯಲ್ಲಿರುವ ಪವಿತ್ರವಾದ
ಪುಣ್ಯ ಕ್ಷೇತ್ರವಾಗಿದೆ.
ಶ್ರೀಗಳ ಸಮಾಧಿಗೆ ನಿತ್ಯ ಅಭಿಷೇಕ ತ್ರಿಕಾಲ ಪೂಜಾದಿಗಳು ನಡೆಯುತ್ತಿವೆ ಮತ್ತು ಅವರ ಪುಣ್ಯತಿಥಿಯನ್ನು ಬಹಳ ವಿಜೃಂಭಣೆಯಿಂದ ಶ್ರೀಮಠದಲ್ಲಿ ಆಚರಿಸಲಾಗುತ್ತಿದೆ.
