

ಶ್ರೀ ಶ್ರೀಮದ್ ಪೂರ್ಣಾನಂದ ಸ್ವಾಮಿ ಮಹಾರಾಜ್ ರ ಶಿಷ್ಯರು ಆದಂತಹ ಶ್ರೀ ಶ್ರೀಮದ್ ಚಿದಾನಂದ ಸ್ವಾಮೀಜಿ ಇವರ ಬಾಲ್ಯದ ಹೆಸರು ರುದ್ರಜಿ ಪಂತ. ಇವರ ವಾಸಸ್ಥಾನ ಸಾವಂತವಾಡಿ ಸಂಸ್ಥಾನದ ಅಜಗಾಂವ್ ಆಗಿತ್ತು. ಅವರ ಉಪನಾಮ ಪ್ರಭು ಮತ್ಕಾರಿ ಎಂಬುದಾಗಿತ್ತು. ರುದ್ರಜಿ ಪಂತರು ಚಿಕ್ಕ ವಯಸ್ಸಿನಲ್ಲಿದ್ದಾಗಲೇ ತಂದೆಯವರ ದೇಹಾಂತವಾಗಿತ್ತು.
ಮಾತೃಶ್ರೀ ರಾಮಬಾಯಿ ತನ್ನ ತವರು ಮನೆಯಲ್ಲಿ ವಾಸವಾಗಿದ್ದರು. ರುದ್ರಜಿ ಪಂತರು ಕೆಲವು ಸಮಯ ದನ-ಕರುಗಳನ್ನು ಕಾಯುವ ಕೆಲಸ ಮಾಡಬೇಕಾಯಿತು. ಆಗ ಅವರಿಗೆ ಅಂದಾಜು 10-12 ವರ್ಷ ಪ್ರಾಯವಾಗಿತ್ತು.
ಒಂದು ದಿನ ಕಾಡಿನಲ್ಲಿ ದನ ಕಾಯುತ್ತಿರುವಾಗ ಅವರಿಗೆ ಒಬ್ಬ ಸಿದ್ದಪುರುಷರ ದರುಶನವಾಯಿತು. ಸಿದ್ದಪುರುಷರು ಒಂದು ಹುಲಿಯ ಮೇಲೆ ಕೂತು ತನ್ನೆಡೆಗೆ ಬರುತ್ತಿದ್ದನ್ನು ನೋಡಿ ಹೆದರದೆ ಸಿದ್ಧಪುರುಷರ ಕಡೆಗೆ ಧಾವಿಸಿ(ಕಂದಮ್ಮ ತನ್ನ ತಾಯಿಯೆಡೆಗೆ ಧಾವಿಸುವಂತೆ) ಅವರ ಕಾಲಿಗೆ ನಮಸ್ಕಾರ ಮಾಡಿದರು. (ಸಿದ್ದಪುರುಷರು ದಾಭೋಲಿ ಮಠದ ಶ್ರೀ ಶ್ರೀ ಪೂರ್ಣಾನಂದ ಸ್ವಾಮಿ ಮಹಾರಾಜ್ ಆಗಿದ್ದರು). ಸಿದ್ಧಪುರುಷರು ಆ ಹುಡುಗನ ಅಂತರಾಳದ ಭಕ್ತಿಯನ್ನು ಗ್ರಹಿಸಿ ಅಲ್ಲಿಯೇ ಜ್ಞಾನೋಪದೇಶ ಮಾಡಿದರು. ರುದ್ರಜಿ ಪಂತರು ಗುರು ಸಾನಿಧ್ಯದಲ್ಲಿ ಕೆಲವು ಕಾಲ ಕಳೆದು ತಮ್ಮ ತಾಯಿಯ ಅನುಮತಿಯನ್ನು ಪಡೆದು ಗುರು ಮಹಾರಾಜರೊಂದಿಗೆ ಉತ್ತರದ ಕಡೆ ತೀರ್ಥಯಾತ್ರೆ ಹೊರಟರು. 12 ವರ್ಷಗಳ ನಂತರ ಗುರು ಶಿಷ್ಯರಿಬ್ಬರು ಮರಳಿ ಬಂದು ಗುರು ಶ್ರೀ ಶ್ರೀ ಪೂರ್ಣಾನಂದ ಸ್ವಾಮೀಜಿ ಯವರು ರುದ್ರಜಿ ಪಂತ್ ರನ್ನು ತನ್ನ ಶಿಷ್ಯರಾಗಿ ಸ್ವೀಕರಿಸಿದರು. ಒಮ್ಮೆ ಚಿದಾನಂದರು ಗುರುಗಳ ಆಜ್ಞೆಯಂತೆ ಕರ್ನಾಟಕ ಪ್ರಾಂತದಲ್ಲಿ ವಾಸಿಸುತ್ತಿದ್ದ ಶಿಷ್ಯ ವೃಂದದವರಿಂದ ಗುರುದಕ್ಷಿಣೆ ಸಂಗ್ರಹಿಸುದಕ್ಕೋಸ್ಕರ ಹೊರಟು, ಮುಂದೆ ದಕ್ಷಿಣಕ್ಕೆ ತೀರ್ಥ ಯಾತ್ರೆ ಮಾಡುತ್ತಾ ಶೃಂಗೇರಿ ಮಠಕ್ಕೆ ಬಂದರು. ಆ ಸ್ಥಳದಲ್ಲಿ ವಿದ್ವಾನ್ ಪಂಡಿತರ ಸಭೆಯಲ್ಲಿ ಬ್ರಹ್ಮಸೂತ್ರದ ಮೇಲೆ ಪ್ರವಚನ ನಡೆಯುತ್ತಿತ್ತು. ಆ ನಿರೂಪಣೆಯಿಂದ ಸಮಾಧಾನವಾಗದ ಪ್ರಯುಕ್ತ ತಮ್ಮ ಶಂಕೆಯ ನಿವಾರಣೆಗಾಗಿ ಅಲ್ಲಿರುವ ಪಂಡಿತರಿಗೆ ಒಂದು ಪ್ರಶ್ನೆಯನ್ನು ಹಾಕಿದರು. ಅದಕ್ಕೆ ಪಂಡಿತರಿಂದ ಉತ್ತರ ದೊರೆಯಿತು. ಆದರೂ ಈ ಉತ್ತರದಿಂದ ಚಿದಾನಂದ ಸ್ವಾಮಿಯವರು ತೃಪ್ತರಾಗಲಿಲ್ಲ . ಅಲ್ಲಿಯ ಪಂಡಿತರು ಚಿದಾನಂದರಿಗೆ ಇಚ್ಛೆ ಇರುವುದಾದರೆ ನಿರೂಪಣೆ ಮಾಡಬೇಕೆಂದು ಸೂಚಿಸಿದರು . ಚಿದಾನಂದರು ಪಂಡಿತರ ಆಜ್ಞೆಯನ್ನು ಶಿರಸಾಮಾನ್ಯ ಮಾಡಿ ನಿರೂಪಣೆಗೆ ಪ್ರಾರಂಭಿಸಿದರು. ಚಿದಾನಂದರ ವಾಣಿಯ ಏಕಪ್ರಕಾರವಾದ ಸೂತ್ರ ನಡೆಯುತ್ತಾ ಹೋಯಿತು. ಅದನ್ನು ಕೇಳಿ ಸಭೆಯ ಮಂಡಳಿ ಹರ್ಷ ಗೊಂಡಿತು. ಪ್ರವಚನ ಮುಗಿದ ನಂತರ ಆಚಾರ್ಯರ ಆಜ್ಞೆಯಂತೆ ಚಿದಾನಂದರಿಗೆ ಮಹಾ ವಸ್ತ್ರಾರ್ಪಣೆ ಮಾಡಿ ಅವರನ್ನು ಗೌರವಿಸಿದರು ಮತ್ತು ತಾವು ಯಾರು,ಎಲ್ಲಿಯವರು, ತಮ್ಮ ಗುರುಗಳು ಹೆಸರು ಇತ್ಯಾದಿ ಮಾಹಿತಿಯನ್ನು ಚಿದಾನಂದರಿಂದ ಆಚಾರ್ಯರು ಪಡೆದುಕೊಂಡರು. ತೀರ್ಥ ಯಾತ್ರೆ ಮಾಡುತ್ತಾ ಚಿದಾನಂದರೂ ತಿರುಗಿ ಶ್ರೀ ಪೂರ್ಣಾನಂದ ಸ್ವಾಮೀಜಿಯ ದರ್ಶನಕ್ಕಾಗಿ ಶ್ರೀ ಮಠಕ್ಕೆ ಬಂದರು ಮತ್ತು ಯಾತ್ರೆಯಲ್ಲಿ ನಡೆದಂತಹ ಸಂಗತಿಗಳನ್ನು ಗುರುಗಳಲ್ಲಿ ನಿವೇದಿಸಿದರು. ಗುರು ಆಜ್ಞೆ ಅನುಸಾರ ಗುರುಗಳಿಂದ ಸನ್ಯಾಸಾಶ್ರಮ ಸ್ವೀಕರಿಸಿದರು. ಶ್ರೀ ಪೂರ್ಣಾನಂದರು ಅವರ ಹೆಸರನ್ನು ಚಿದಾನಂದ ರೆಂದು ಇಟ್ಟು ದಾಬೋಲಿ ಮಠದ ಜವಾಬ್ದಾರಿಯನ್ನು ಅವರ ಕೈಗೆ ಹಸ್ತಾಂತರಿಸಿದರು. ಆ ಕಾಲದಲ್ಲಿ ಪರುಳೇಕರ್ ದೇಸಾಯಿ ಮನೆತನದಲ್ಲಿ ಹೀರ್ ಸಾಮಂತ ಎಂಬ ಗ್ರಹಸ್ಥ ತುಂಬಾ ಪ್ರಬಲನಾಗಿದ್ದ. ಆತ ಚಿದಾನಂದರ ಕಾರ್ಯಗಳಲ್ಲಿ ಹಸ್ತಕ್ಷೇಪ ಮಾಡುತ್ತಿದ್ದ.
ತಮ್ಮ ಗುರುಗಳಂತೆ ಚಿದಾನಂದರಿಗೆ ಏಕಾಂತ ಅತ್ಯಂತ ಪ್ರಿಯವಾಗಿತ್ತು. ಸನ್ಯಾಸಾಶ್ರಮದ ನಂತರ ಅವರು ತಮ್ಮ ಅತ್ಯಂತ ಪ್ರಿಯವಾದ ಬಾಗಲಾಂಚಿ ರಾಯಿ ಎಂಬ ಸ್ಥಳದಲ್ಲಿ ಒಂದು ಮಠವನ್ನು ಕಟ್ಟಿಸಿ ಕೊನೆಯವರೆಗೂ ಅಲ್ಲಿಯೇ ನಿಂತರು. ಈ ಸ್ಥಳ ಒಂದು ಸಣ್ಣ ಕಾಡಿನಲ್ಲಿ ಎತ್ತರವಾದ ಜಾಗವಾಗಿತ್ತು ಮತ್ತು ಆ ಕಾಡಿನಲ್ಲಿ ವ್ಯಾಘ್ರಾದಿ ಹಿಂಸ್ರ ಪಶುಗಳ ವಸತಿ ಇತ್ತು. ಚಿದಾನಂದ ಯತಿಗಳು ಆ ಹಿಂಸಾ ಪಶುಗಳನ್ನು ಸಲುಗೆಯಿಂದ ಮನುಷ್ಯರಂತೆ ಪ್ರೇಮದಿಂದ ನೋಡಿಕೊಳ್ಳುತ್ತಿದ್ದರು . ಮಠದ ಎಡ ಪಾರ್ಶ್ವದಲ್ಲಿ ಎತ್ತರದಲ್ಲಿ ಬಹಳ ಶುದ್ಧವಾದ ಅತಿ ಪವಿತ್ರವುಳ್ಳ ಒಂದು ನೀರಿನ ಉಗಮವು ಸ್ವಾಮಿಗಳಿಗೆ ಸಿಕ್ಕಿತು. ಈ ಶುದ್ಧ ಜಲಪಾನವನ್ನು ಮಾಡಿ ಆ ಕಾಡಿನಲ್ಲಿ ಕಂದ ಮೂಲಾದಿಗಳನ್ನು ಭಕ್ಷಣೆ ಮಾಡುತ್ತಾ ಚಿದಾನಂದ ಸ್ವಾಮಿಯವರು ತಮ್ಮ ಮುಂದಿನ ಆಯುಷ್ಯವನ್ನು ಈ ಕ್ಷೇತ್ರದಲ್ಲಿ ಕಳೆದರು.
ಮಠದ ಎದುರಿನಲ್ಲಿರುವ ಬಹಳ ಹಳೆಯ ಅಶ್ವತ್ಥ ಮರದಿಂದ ಎಷ್ಟೇ ಜೋರು ಗಾಳಿ ಬಂದರೂ ಅದರ ಎಲೆಗಳಿಂದ ಸಳಸಳ ಎಂಬ ಶಬ್ದ ಕೇಳಿಸದು. ಈ ವಿಷಯದಲ್ಲಿ ಎರಡು ರೀತಿಯ ಸಂಗತಿ ಇದೆ ಎಂದು ಹೇಳುತ್ತಾರೆ. ಒಂದು ದಿನ ಚಿದಾನಂದ ಸ್ವಾಮೀಜಿಯವರ ಪುರಾಣ ಪ್ರವಚನ ನಡೆಯುತ್ತಿರುವಾಗ ಗಾಳಿಯ ರಭಸದಿಂದ ಎಲೆಗಳು ಸಳಸಳ ಎಂಬ ಶಬ್ದ ಮಾಡಲಾರಂಭಿಸಿದವು. ಶ್ರೀಗಳು ಪ್ರವಚನ ಮಾಡುವಾಗ ತಮ್ಮ ಒಂದು ಕೈಯಿಂದ ತಟಸ್ಥವಾಗಿರುವಂತೆ ಆ ಮರಕ್ಕೆ ಸಂಜ್ಞೆ ಮಾಡಿದ್ದಾರೆಂದೂ ಆ ಬಳಿಕ ಆ ಶಬ್ದ ಕೇಳುವುದಿಲ್ಲ ಎಂದು ಒಂದು ಪ್ರತೀತಿ. ಇನ್ನು ಕೆಲವರು ಹೇಳುವಂತೆ ಸನ್ನಿಧಿಯ ಒಂದು ವ್ಯಾಘ್ರಕ್ಕೆ ಆ ಶಬ್ದ ಕೇಳಲಾಗಲಿಲ್ಲವೆಂದೂ, ಅದು ತನ್ನ ಬಾಲವನ್ನು ಜೋರಾಗಿ ನೆಲಕ್ಕೆ ಅಪ್ಪಳಿಸಿದ ನಂತರ ಆ ಮರದ ಎಲೆಗಳ ಶಬ್ದ ನಿಂತು ಹೋಯಿತು ಎಂಬ ಕತೆಯೂ ಇದೆ. (ಸ್ವಾಮಿ ರಾಮ ತೀರ್ಥರು ಹಿಮಾಲಯದಲ್ಲಿ ಹಿಮದ ಪ್ರಪಾತವನ್ನು ಕೇವಲ ತಮ್ಮ ನೇತ್ರ ಸಂಕೇತದಿಂದ ನಿಲ್ಲಿಸಿದುದನ್ನು ನಾವು ಕೇಳಿರುತ್ತೇವೆ.)
ಚಿದಾನಂದ ಸ್ವಾಮಿಯವರು ಅನೇಕ ಗ್ರಂಥಗಳ ರಚನೆ ಮಾಡಿದ್ದುದಾಗಿ ತಿಳಿಯುತ್ತದೆ. (1 )ಯೋಗ ರಹಸ್ಯ (2)ದೇವಿ ಭಗವತ (3)ಬ್ರಹ್ಮಸೂತ್ರಾವಳಿ (4)ಸ್ವಾನಂದಲಹರಿ ಹೀಗೆ ಇನ್ನು ಹಲವು ಗ್ರಂಥಗಳನ್ನು ರಚಿಸಿದ್ದರು. ಆದರೆ ಮಠಕ್ಕೆ ಬೆಂಕಿ ಅನಾಹುತದಲ್ಲಿ ಅವುಗಳೆಲ್ಲವೂ ಅಗ್ನಿಗಾಹುತಿಯಾದವು. ಸದ್ಯ ಆ ಪೈಕಿ (4)ಸ್ವಾನಂದ ಲಹರಿ ಎಂಬ ಒಂದೇ ಗ್ರಂಥ ಉಪಲಬ್ಧವಿದೆ.
ಶ್ರೀ ಚಿದಾನಂದರು ಮಠದಲ್ಲಿ ಶ್ರೀ ಪೂರ್ಣಾನಂದ ಸ್ವಾಮೀಜಿಯವರ ಪಾದುಕೆಗಳನ್ನು ಸ್ಥಾಪನೆ ಮಾಡಿದರು. ಶ್ರೀ ಶ್ರೀ ಚಿದಾನಂದ ಸ್ವಾಮೀಜಿಯವರು ತಮ್ಮ ಮನದಿಚ್ಚೆಯ ಶಿಷ್ಯ ಸಿಗದೇ ಇದ್ದುದರಿಂದ ಶಿಷ್ಯ ಸ್ವೀಕಾರ ಮಾಡಲಿಲ್ಲ ಎಂಬುದಾಗಿ ತಿಳಿದು ಬರುತ್ತದೆ.
ಶ್ರೀಮದ್ ಚಿದಾನಂದ ಸ್ವಾಮಿಯವರು 80ನೇ ವಯಸ್ಸಿನಲ್ಲಿ ಮಠದಲ್ಲಿ ಸಮಾಧಿಸ್ತರಾದರು.
ಶ್ರೀಮದ್ ಚಿದಾನಂದ ಸ್ವಾಮೀಜಿಯವರ ಸಮಾಧಿಯ ಮೇಲೆ ಶಿವಪಿಂಡಿಕೆ ಸ್ಥಾಪನೆ ಮಾಡಿ ಅದರ ಮೇಲೆ ಅಭಿಷೇಕ ಪಾತ್ರೆಯನ್ನು ತೂಗಾಡಿಸುವ ಸಲುವಾಗಿ ಸಮಾಧಿಯ ಗರ್ಭಗೃಹದಲ್ಲಿ ಮಧ್ಯ ಒಂದು ಮರದ ಅಡ್ಡ ಜಂತಿಯನ್ನು ಹಾಕಲಾಯಿತು. ಪ್ರತಿ ವರ್ಷ ಮಹಾಶಿವರಾತ್ರಿಯ ದಿವಸ ಮೇಲಿನ ಜಂತಿಯ ಎರಡು ಕಡೆಯಲ್ಲಿ ಮರದಂತೆ ಇದ್ದು ಮಧ್ಯಭಾಗದಿಂದ ನೀರಿನ ಹನಿಗಳು ಹರಿದು ಬಂದು ಒಟ್ಟುಗೂಡಿ ಅದು ಸಣ್ಣಧಾರೆಯಾಗಿ ಮಾರ್ಪಟ್ಟು ಧಾರಾಪಾತ್ರೆಯಲ್ಲಿ ಬೀಳುತ್ತಿತ್ತು. ಈ ಅಲೌಕಿಕ ವಿಚಿತ್ರ ಕಳೆದ 125 ವರ್ಷಗಳಿಂದ ನಿರಂತರವಾಗಿ ನಡೆಯುತ್ತಿದೆ. ಸತತ ಧಾರೆಯು ಮೃಗಶಿರಾದ ಮಳೆ ಪ್ರಾರಂಭವಾಗುವ ಹೊತ್ತಿಗೆ ನಿಂತುಹೋಗುತ್ತಿತ್ತಲ್ಲದೆ ಜಂತಿಯು ಒಣಗಿಹೋಗುತ್ತಿದ್ದದ್ದು ವಿಶೇಷ. ಈ ವಿಚಾರವನ್ನು ಎಷ್ಟು ವಿದ್ವಾಂಸರು, ಶಾಸ್ತ್ರಜ್ಞರು ಅಲ್ಲಿಗೆ ಹೋಗಿ ಈ ವಿಷಯದಲ್ಲಿ ತುಂಬಾ ತಪಾಸಣೆ ಮಾಡಿದರೂ ಇಲ್ಲಿಯವರೆಗೆ ಆ ವಿಚಿತ್ರತೆಯ ಕಾರಣ ಏನೆಂದು ತಿಳಿದಿಲ್ಲ . ಒಮ್ಮೆ ಜಂತಿಯನ್ನು ತೆಗೆದು ಹೊರಗಿನಿಂದ ಒಂದು ಬಿದಿರು ತಂದು ಆ ಜಾಗದಲ್ಲಿ ಇಟ್ಟಾಗ ಮೊದಲಿನ ಹಾಗೆಯೇ ಆ ಜಾಗದಲ್ಲಿ ನೀರಿನ ಹನಿ ಬೀಳತೊಡಗಿತ್ತು. ಇಂತಹ ವಿಚಿತ್ರ ಬೇರೆ ಎಲ್ಲಿಯೂ ನಡೆದದ್ದು ಗಮನಕ್ಕೆ ಬಂದಿಲ್ಲ. ಶೋಧನೆಯ ಭರಾಟೆಯಿಂದಾಗಿ ಇತ್ತೀಚಿಗೆ ನೀರು ಹನಿ ಬೀಳುವುದು ಸ್ತಬ್ಧವಾಯಿತು.
ಬಾಗಲಾಂಚಿ ರಾಯಿ ಮಠದಲ್ಲಿ ಚಿದಾನಂದ ಸ್ವಾಮೀಜಿಯ ಮುಖ್ಯ ಸಮಾಧಿ ಇದ್ದು ಹೊರಗೆ ಶ್ರೀ ಬ್ರಹ್ಮಾನಂದ ಸ್ವಾಮಿ ಹಾಗೂ ಶ್ರೀ ವಿಮಲಾನಂದ ಸ್ವಾಮಿ ಮತ್ತು ಅವರ ಮುಂದಿನ ಶ್ರೀಗಳು ಹೀಗೆ ಮೂರು ಸಮಾಧಿಗಳಿವೆ. ಇಂದಿಗೂ ಈ ಮಠದಲ್ಲಿ ವ್ಯಾಧಿಗ್ರಸ್ತ, ಪಿಶಾಚಿ ಪೀಡಿತರಿಗೆ,ಇಲ್ಲಿ ಉಳಿದುಕೊಳ್ಳುವ ಭಕ್ತರಿಗೆ ಒಮ್ಮೊಮ್ಮೆ ಸ್ವಪ್ನದ ಮೂಲಕ ತಮ್ಮ ಇರುವನ್ನು ಸೂಚಿಸಿದ ದೃಷ್ಟಾಂತ ಇರುವುದಾಗಿ ಭಕ್ತರು ತಿಳಿಸುತ್ತಾರೆ. ಇದು ಸರ್ವ ಭಕ್ತರಿಗೂ ತಮ್ಮ ಮನೋಕಾಮನೆಗಳನ್ನು ಈಡೇರಿಸುವಂತಹ ಜಾಗೃತ ವ್ಯವಸ್ಥೆಯಲ್ಲಿರುವ ಪವಿತ್ರವಾದ ಪುಣ್ಯ ಕ್ಷೇತ್ರವಾಗಿದೆ.
(ಪೌಷ ಕೃಷ್ಣ ಪಕ್ಷ ದಶಮಿ- ಅವರ ಪುಣ್ಯತಿಥಿ )